ಅಬ್ಬಾಸಿದ್ ಕಲೀಫರು
	
ಇಸ್ಲಾಂ ಚರಿತ್ರೆಯಲ್ಲಿ ಇವರ ಸಂತತಿ ಅತ್ಯಂತ ಪ್ರಸಿದ್ಧವಾದುದು. ಇವರು ಮಹಮದ್ ಪೈಗಂಬರನ ಚಿಕ್ಕಪ್ಪ ಅಲ್ ಅಬ್ಬಾಸ್ ಎಂಬುವವನ ಮನೆತನಕ್ಕೆ ಸೇರಿದವರು. ಅಬ್ದುಲ್ ಅಬ್ಬಾಸ್ ಕ್ರಿ.ಶ. 749ರಲ್ಲಿ ಅಲ್-ಸಫಾ ಎಂಬ ಬಿರುದಿನಿಂದ ತಾನೇ ಕಲೀಫನೆಂದು ಘೋಷಿಸಿಕೊಂಡ. ಈತ ತನ್ನ ಹಿಂದಿನ ಉಮ್ಮಾಯಿದ್ ಸಂತತಿಯನ್ನು ನಿರ್ದಯೆಯಿಂದ ಅಂತ್ಯಗೊಳಿಸಿದ. ಅಬ್ದುಲ್ ಅಬ್ಬಾಸನ ಸಹೋದರನೂ ಉತ್ತರಾಧಿಕಾರಿಯೂ ಆದ ಅಬ್ದುಲ್ ಜಾಫರ್ ಅಲ್-ಮನ್ಸೂರನು ಬಾಗ್ದಾದ್ ನಗರವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ. ಈ ಸಂತತಿಯ ಮೊದಲಿನ ಒಂಭತ್ತು ಜನ ರಾಜರು ಅತ್ಯಂತ ಸಮರ್ಥರು. ಈ ಒಂಭತ್ತು ಜನ ರಾಜರಲ್ಲಿ ಹಾರೂನ್ ಮತ್ತು ಅವನ ಮಗ ಮಾಮೂನ್‍ರ ಆಳ್ವಿಕೆ ಅತ್ಯಂತ ಶ್ಲಾಘನೀಯವಾದದ್ದು. ಇವರ ಕಾಲದಲ್ಲಿ ಸಾಮ್ರಾಜ್ಯ ದಾಹವಡಗಿ ಸಂಸ್ಕøತಿ ವಿಕಾಸಹೊಂದಿತು. ಈ ಸಾಮ್ರಾಟರಲ್ಲಿ 780ರಿಂದ 809ರ ವರೆಗೆ ಆಳಿದ ಹಾರೂನ್-ಅಲ್-ರಷೀದ್ ಅತ್ಯಂತ ಪ್ರಸಿದ್ಧ. ಈತನ ಕಾಲದಲ್ಲಿ ಸಾರ್ವಜನಿಕ ಆಡಳಿತ ಉಚ್ಛ್ರಾಯ ಸ್ಥಿತಿಯನ್ನು ಮುಟ್ಟಿತು. ಇವನಿಗೆ ಸಂಬಂಧಿಸಿದಂತೆ ಅರೇಬಿಯನ್ ನೈಟ್ಸ್‍ನಲ್ಲಿ ಆಹ್ಲಾದಕರವಾದ ಕಥೆಗಳಿವೆ. ಸನ್ಮಾರ್ಗಿಯೂ ದಯಾವರನೂ ಆದ ಇವನು ನಿರ್ಗತಿಕರಿಗೆ ಪರಿಹಾರವನ್ನೊದಗಿಸಲು ರಾತ್ರಿ ವೇಳೆ ಬಾಗ್ದಾದ್ ನಗರದ ರಸ್ತೆಗಳಲ್ಲಿ ಸಂಚರಿಸುತ್ತಿದ್ದ. ಪ್ರಜಾಹಿತೈಷಿಯಾದ ಈತ ಮಸೀದಿ, ವಿದ್ಯಾಶಾಲೆ, ವೈದ್ಯಶಾಲೆ, ಅನ್ನಸತ್ರ, ರಸ್ತೆಗಳನ್ನು, ಸೇತುವೆಗಳನ್ನೂ ಕಾಲುವೆಗಳನ್ನೂ ನಿರ್ಮಿಸಿದ. ವಿಜ್ಞಾನ ಮತ್ತು ಸಾಹಿತ್ಯದಂತೆ ಸಂಗೀತಕ್ಕೂ ಗೌರವಸ್ಥಾನವನ್ನು ದೊರಕಿಸಿಕೊಟ್ಟ. ಮಹಮದೀಯರಲ್ಲಿ ಈತನೇ ಮೊದಲಿಗ. ವಿದ್ಯೆ ಮತ್ತು ಕಲೆಯ ಪ್ರೋತ್ಸಾಹದಿಂದಾಗಿ ಅವನ ರಾಜಾಸ್ಥಾನ ಪ್ರಸಿದ್ಧಿ ಪಡೆಯಿತು. ಈತ ಅನೇಕ ವೈಜ್ಞಾನಿಕ ಗ್ರಂಥಗಳನ್ನು ಅರಬ್ಬಿಗೆ ತರ್ಜುಮೆ ಮಾಡಿಸಿದ. ಸುಪ್ರಸಿದ್ಧ ವೈಯ್ಯಾಕರಣಿ ಅಸ್ಮ್-ಯಿ, ಸಂಗೀತಗಾರನಾದ ಮೊಸುಲಿ ಹಾಗೂ ವೈದ್ಯನಾದ ಗೇಬ್ರಿಯಲ್ ಇವರು ಈತನ ಸಮಕಾಲೀನರು. ಈತ ತಾನೇ ಕವಿಯಾಗಿದ್ದುದಲ್ಲದೇ ಕವಿಗಳ ಉದಾರ ಪೋಷಕನೂ ಆಗಿದ್ದ. ಪಶ್ಚಿಮ ದೇಶಗಳಲ್ಲಿ ಪ್ರಸಿದ್ಧನಾದ ಶಾರ್ಲೆಮನ್‍ನೊಡನೆಯೂ ಮತ್ತು ಪೂರ್ವದಲ್ಲಿ ಚೀನಾ ದೇಶದೊಡನೆಯೂ ಸಂಪರ್ಕ ಹೊಂದಿದ್ದ. ಹಾರೂನ್-ಅಲ್-ರಷೀದ್ ಶಾರ್ಲೆಮನ್ನನಿಗೆ ಕಳುಹಿಸಿಕೊಟ್ಟಿದ್ದ ಗಡಿಯಾರವನ್ನು ಅದ್ವಿತೀಯ ಕಲಾಪೂರ್ಣ ವಸ್ತುವೆನ್ನಲಾಗಿದೆ.

	ಹಾರೂನ್-ಅಲ್-ರಷೀದ್‍ನ ಮಗನೂ ಉತ್ತರಾಧಿಕಾರಿಯೂ ಆದ ಮಾಮೂನ್ ಈ ಸಂತತಿಯ ಎರಡನೆಯ ಅತಿ ಮುಖ್ಯ ಚಕ್ರವರ್ತಿ. ಈತನು 813-833ರ ವರೆಗೆ ಆಳಿದ. ಸಿಸಿಲಿಯನ್ನು ಜಯಿಸಿ ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡ. ಈತನ ಆಳ್ವಿಕೆಯನ್ನು ಇಸ್ಲಾಂ ಚರಿತ್ರೆಯ ಆಗಸ್ಟ್‍ನ ಕಾಲ ಎಂದು ಕರೆಯಲಾಗಿದೆ. ಈತನ 20 ವರ್ಷಗಳ ಆಳ್ವಿಕೆಯಲ್ಲಿ ಸಾಮ್ರಾಜ್ಯ ಸರ್ವತೋಮುಖವಾದ ಅಭಿವೃದ್ಧಿಯನ್ನು ಪಡೆಯಿತು. ಗಣಿತಶಾಸ್ತ್ರ, ತತ್ತ್ವಶಾಸ್ತ್ರ, ಖಗೋಳ ಶಾಸ್ತ್ರ, ವೈದ್ಯಶಾಸ್ತ್ರ, ವ್ಯಾಕರಣ, ಚರಿತ್ರೆ ಮತ್ತು ಭಾಷಾಶಾಸ್ತ್ರ ಇವುಗಳಲ್ಲಿ ವಿಶೇಷ ಪ್ರಗತಿ ಉಂಟಾಯಿತು. ಮಾಮೂನ್ ಚಕ್ರವರ್ತಿ ತನ್ನ ಪ್ರಜೆಗಳ ನಿಜವಾದ ಪುರೋಭಿವೃದ್ಧಿ ಶಿಕ್ಷಣ ಮತ್ತು ಸಂಸ್ಕøತಿಯನ್ನವಲಂಭಿಸಿದೆ ಎಂದು ನಂಬಿದ್ದನಲ್ಲದೆ ಮತೀಯ ಅಥವಾ ಜಾತೀಯ ವಿಭೇದಗಳಿಂದ ಹೊರತಾಗಿದ್ದ. ಈತ ಸ್ಥಾಪಿಸಿದ ರಾಜ್ಯಸಲಹಾಸಮಿತಿಯಲ್ಲಿ ಮಹಮದೀಯರೂ, ಕ್ರೈಸ್ತರೂ, ಯಹೋದಿಗಳೂ, ಜೊರಾಸ್ಟ್ರಿಯನ್ನರೂ, ಸೆಬಿಯನ್ನರೂ ಇದ್ದರು. ಮಹಮದೀಯರಲ್ಲದವರಿಗೂ ವಿಚಾರ ಹಾಗೂ ಮತೀಯ ಸ್ವಾತಂತ್ರ್ಯವಿತ್ತು. ಈತನ ಕಾಲದಲ್ಲಿ ಅರಬ್ ಸಾಮ್ರಾಜ್ಯದಲ್ಲಿ ಹನ್ನೊಂದು ಸಹಸ್ರ ಕ್ರೈಸ್ತಪ್ರಾರ್ಥನಾಮಂದಿರಗಳು ನೂರಾರು ಜೊರಾಸ್ಟ್ರಿಯನ್ನರ ಪೂಜಾಮಂದಿರಗಳು ಇದ್ದುವು. ಈತನ ಕಾಲದಲ್ಲಿ ಮುಸ್ಲಿಮರ ಮತೀಯ ಅಂಧಾಭಿಮಾನ ಕಡಿಮೆಯಾಗಿ ಆದರ್ಶ ಸಮಾಜದ ನಿರ್ಮಾಣವಾಯಿತು. ಮಹಮದೀಯ ಸಾಂಪ್ರದಾಯಿಕ ಭಾವನೆಗಳು ಸಾಮಾಜಿಕ ಮತ್ತು ರಾಜಕೀಯ ಪ್ರಗತಿಯನ್ನು ಸ್ಥಗಿತಗೊಳಿಸುತ್ತವೆಂಬುದಾಗಿ ಮಾಮೂನ್ ಅರಿತಿದ್ದನಾದ್ದರಿಂದ ಸಂಕುಚಿತ ಮತೀಯ ಭಾವನೆಗಳಿಂದ ಸಾಮ್ರಾಜ್ಯವನ್ನು ಪಾರುಗೊಳಿಸಿದ. ಈತ ಪ್ರಸಿದ್ಧ ಸಂತನಾದ ಅರ್-ರಿಜಾó ಎಂಬುವನ ಶಿಷ್ಯ. ಪವಿತ್ರ ಕುರಾನು ಗ್ರಂಥವನ್ನು ಆಳವಾಗೂ ಎಚ್ಚರಿಕೆಯಿಂದಲೂ ಅಭ್ಯಸಿಸಿದ. ತನ್ನ ಬಿಡುವಿನ ವೇಳೇಯನ್ನು ತತ್ತ್ವಶಾಸ್ತ್ರ, ವಿಜ್ಞಾನ ಮತ್ತು ಸಾಹಿತ್ಯಕ್ಕಾಗಿ ವಿನಿಯೋಗಿಸುತ್ತಿದ್ದ. ಮಾನವ ವಿಚಾರಪರತೆಗೆ ಪ್ರಾಮುಖ್ಯ ಕೊಟ್ಟಿದ್ದ. ಈತನದೇ ಆದ ವಿಚಾರಪರ ಪಂಥವನ್ನು ಮುತಾಜಾ ಲೈಟ್ಸ್ ಎಂದು ಕರೆಯಲಾಗಿದೆ. ಈತ ಅಲೆಗ್ಜಾಂಡ್ರಿಯ, ಅಥೆನ್ಸ್ ಮತ್ತು ಭಾರತ ದೇಶಗಳಿಂದ ಅನೇಕ ಗ್ರಂಥಗಳನ್ನು ತರಿಸಿ ತರ್ಜುಮೆ ಮಾಡಿಸಿದ. ಡುಬಾನ್ (ದುವಾನ್, ದೇವನ್) ಎಂಬ ಬ್ರಾಹ್ಮಣ ವಿದ್ವಾಂಸ ತನ್ನ ಸಂಸ್ಕøತ ಗ್ರಂಥಗಳೆಲ್ಲವನ್ನೂ ಭಾಷಾಂತರಿಸಿದ. ಮಾಮೂನ್ ಖಗೋಳಶಾಸ್ತ್ರಾಭ್ಯಾಸಕ್ಕಾಗಿ ವೀಕ್ಷಣಾ ಕೇಂದ್ರಗಳನ್ನು ಸ್ಥಾಪಿಸಿದ. ಈತನ ಕಾಲದಲ್ಲಿ ಸೂರ್ಯಚಲನೆ, ಗ್ರಹಣಗಳು, ಧೂಮಕೇತು ಮುಂತಾದ ಖಗೋಳಶಾಸ್ತ್ರದ ಅಧ್ಯಯನಗಳಲ್ಲಿ ವಿಶೇಷವಾದ ಪ್ರಗತಿಯುಂಟಾಯಿತು. ಭೂಮಿಯ ವ್ಯಾಸವನ್ನು ಲೆಕ್ಕಾಚಾರ ಮಾಡಲಾಯಿತು. ಭೂಮಿಯ ವ್ಯಾಸವನ್ನು ಲೆಕ್ಕಾಚಾರ ಮಾಡಲಾಯಿತು. ಅಬುಲ್ ಹಸನ್ ದೂರದರ್ಶಕ ಯಂತ್ರವನ್ನು ಕಂಡುಹಿಡಿದ. ರೇಖಾಗಣಿತ, ಹವಾಮಾನಶಾಸ್ತ್ರ ಕಣ್ಣಿನ ರಚನೆ ಹಾಗೂ ಅದಕ್ಕೆ ಸಂಬಂಧಪಟ್ಟ ವಿಷಯಗಳು, ಯಂತ್ರಶಾಸ್ತ್ರ ಮತ್ತು ವೈದ್ಯಕೀಯಶಾಸ್ತ್ರ ಇವುಗಳಿಗೆ ಸಂಬಂಧಿಸಿದಂತೆ ಅನೇಕ ಗ್ರೀಕ್ ಗ್ರಂಥಗಳು ಭಾಷಾಂತರವಾದುವು. ಮಾಮೂನನ ತರುವಾಯ ಅಬ್ಬಾಸಿದ್ ಸಂತತಿ ಕ್ಷೀಣಿಸಿತು. ಕೊನೆಗೆ 1258ರಲ್ಲಿ ಮಂಗೋಲರ ಹಲಾಕುಖಾನನಿಂದ ಕೊನೆಗೊಂಡಿತು.		 

(ಬಿ.ಎಸ್.ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ